ಮಾಯಾವಾದ
ಅದ್ವೈತ ಸಿದ್ಧಾಂತದಲ್ಲಿ ಪ್ರತಿಪಾದಿತವಾಗಿರುವ ಎಂಟು ಪ್ರಧಾನ ವಿಷಯಗಳಲ್ಲಿ ಒಂದು. ಇದನ್ನು ಮಾಯಾತತ್ತ್ವ್ವವೆಂದು ಕರೆಯುವುದಿದೆ. ಆದಿಶಂಕರಾಚಾರ್ಯರು `ಬ್ರಹ್ಮಸತ್ಯಂ ಜಗನ್ಮಿಥ್ಯಾಃ ಜೀವೋ ಬ್ರದ್ವೈವ ನಾಪುರಃ' ಎಂದು ಹೇಳಿದುದು ವಿಪುಲವಾದ ಚರ್ಚೆ, ವ್ಯಾಖ್ಯಾನಗಳಿಗೆ ಮೂಲವಾಯಿತು. ಅನೇಕರು ಈ ವಾಕ್ಯದ ಉತ್ತರ ಭಾಗವನ್ನು ಮರೆತು ಜಗನ್ಮಿಥ್ಯಾ ಎಂದು ವಾದಿಸುವುದರಲ್ಲಿ ನಿರತರಾದರು. ಹೀಗೆ ಜಗನ್ಮಿಥ್ಯಾ ಎಂದು ವಾದಿಸಲು ಎಲ್ಲರೂ ಬಳಸಿಕೊಳ್ಳುವ ಮಾಯಾತತ್ತ್ವ ವಿವರಣೆಗಳನ್ನು ಮೀರಿ ನಿಂತಿದೆ. ಮಾಯೆ ಎಂಬ ಶಬ್ದ ಪ್ರಾಚೀನ ಉಪನಿಷತ್ತುಗಳಲ್ಲಿ ಕಾಣಿಸಿಕೊಳ್ಳುವುದು ವಿರಳ, ಆದರೆ ಅದಕ್ಕೆ ಸಂವಾದಿಯಾದ `ಅವಿದ್ಯಾ ಎಂಬ ಶಬ್ದ ಹೇರಳವಾಗಿ ಕಾಣಿಸಿಕೊಳ್ಳುತ್ತದೆ. ಸಾಂಖ್ಯರ ಪ್ರಕೃತಿತತ್ತ್ವಕ್ಕೆ ಅದ್ವೈತಿಗಳ ಮಾಯಾತತ್ತ್ವ ಸಮಾನವಾದುದು. ಹಿಂದೂ ತತ್ತ್ವಶಾಸ್ತ್ರದ ಆರು ದರ್ಶನಗಳಲ್ಲಿ ಬರುವ `ಬ್ರಹ್ಮ-ಜಗತ್ತು-ಜೀವ-ಮೋಕ್ಷ ವಿಚಾರವನ್ನು ವಿವರಿಸಲು ಈ ವಾದ ಅತ್ಯಗತ್ಯವಾಗಿರುತ್ತದೆ.

ಸ್ವರೂಪ: ಈ ತತ್ತ್ವವನ್ನು ಸರಳವಾಗಿ ನಿರೂಪಿಸುವುದಾದರೆ ಇರುವುದನ್ನು ಇಲ್ಲದಂತೆ, ಇಲ್ಲದಿರುವುದನ್ನು ಇರುವಂತೆ ತೋರಿಸುವಂಥಾದ್ದು ಎನ್ನಬಹುದು. ಅದ್ವೈತ ಸಿದ್ಧಾಂತದ ಪ್ರಕಾರ ಬ್ರಹ್ಮವೊಂದೇ ಸತ್ಯವಾದುದು-`ಬ್ರಹ್ಮ ಸತ್ಯಂ' ನಾವು ಕಾಣುವ ವೈವಿಧ್ಯಮಯ ಜಗತ್ತು ಮಿಥ್ಯ. ಅಂದರೆ ಅದಕ್ಕೆ ಅಸ್ತಿತ್ವವಿಲ್ಲ. ಹಾಗಾದರೆ ಜೀವ-ಜಗತ್ತು ಕಾಣುತ್ತಿಲ್ಲವೆ ಎಂದರೆ, ಅದು ಮಾಯೆಯ ಪ್ರಭಾವದಿಂದಾಗಿ ಎಂದು ಉತ್ತರ ಬರುತ್ತದೆ. ಈ ಮಾಯೆಗೂ ಸ್ವತಂತ್ರ ಅಸ್ತಿತ್ವವಿಲ್ಲ. ಬ್ರಹ್ಮ ಮತ್ತು ಮಾಯೆ ಎರಡೂ ಸೇರಿ ಜಗತ್ತನ್ನು ಸೃಷ್ಟಿಸುತ್ತವೆ. ಬ್ರಹ್ಮ ನಿರ್ವಿಕಾರ, ನಿರ್ಗುಣ, ನಿರಂಜನವಾದರೆ, ಮಾಯೆ ಪರಿವರ್ತನಶೀಲ ಜಗತ್ತನ್ನು ಅಸ್ತಿತ್ವಕ್ಕೆ ತರುತ್ತದೆ. ಮಾಯೆಗೆ ಆವರಣ ಶಕ್ತಿ ಮತ್ತು ವಿಕ್ಷೇಪಶಕ್ತಿ ಎಂಬ ಎರಡು ವಿಶಿಷ್ಟ ಶಕ್ತಿಗಳಿವೆ. ಮೊದಲನೆಯ ಶಕ್ತಿಯ ಪ್ರಭಾವದಿಂದ ವಸ್ತು ವಿಷಯಗಳ ನೈಜಸ್ವರೂಪ ಮರೆಯಾಗುತ್ತದೆ. ಎರಡನೆಯ ವಿಕ್ಷೇಪ ಶಕ್ತಿಯಿಂದ ನಿಜವಾದ ವಸ್ತುವಿಷಯಗಳ ಬದಲು ಬೇರೆಯೇ ಆದ ವಸ್ತು ವಿಷಯಗಳು ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಮಣ್ಣಿನಿಂದಲೇ ಮಾಡಿದ ಮಡಕೆಗಳು ಪ್ರಧಾನವಾಗಿ ಮಣ್ಣಿನ ಸ್ವರೂಪವೇ ಮರೆಯಾದಂತೆ ಕಾಣುತ್ತವೆ. ಅದೇ ರೀತಿ ಚಿನ್ನಕ್ಕೆ ಬದಲು ಆಭರಣಗಳೇ ಎದ್ದು ಕಾಣುತ್ತವೆ. ದಾರಿಯಲ್ಲಿ ಬಿದ್ದಿರುವ ಹಗ್ಗ ಹಾವಿನಂತೆ ಕಾಣಿಸುತ್ತದೆ. ಬಿಸಿಲಿನ ಝಳಕ್ಕೆ ಮರೀಚಿಕೆ ನೀರನ್ನು ತೋರಿಸುತ್ತದೆ. 

ಬ್ರಹ್ಮವೊಂದೇ ಸತ್ಯವಾದರೂ ಮಾಯೆಯಿಂದಾಗಿ ವೈವಿಧ್ಯಮಯ ಜಗತ್ತು ಕಾಣಿಸಿಕೊಳ್ಳುತ್ತದೆ. ಇಂದ್ರಿಯಾನುಭವಗಳೆಲ್ಲವೂ ಸತ್ಯವೆಂಬ ಭಾವವನ್ನು ಮೂಡಿಸುವುದರಿಂದಾಗಿ ಮಾಯೆ `ಸದ್ವಸ್ತುವಾಗಿ ತೋರುತ್ತದೆ. ಬ್ರಹ್ಮದ ಸಾಕ್ಷತ್ಕಾರವಾದಾಗ ಮರೆಯಾಗುವ ಮಾಯೆ `ಅಸದ್ವಸ್ತು ಎನ್ನಿಸಿಕೊಳ್ಳುತ್ತದೆ. ಬ್ರಹ್ಮವನ್ನು ಬಿಟ್ಟು ಮಾಯೆಗೆ ಪ್ರತ್ಯೇಕ ಅಸ್ತಿತ್ವವಿಲ್ಲ. ಮಣ್ಣು ಮತ್ತು ಮಡಕೆ ಬ್ರಹ್ಮವನ್ನು ಬಿಟ್ಟು ಮಾಯೆಗೆ ಪ್ರತ್ಯೇಕ ಅಸ್ತಿತ್ವವಿಲ್ಲ. ಮಣ್ಣು ಮತ್ತು ಮಡಕೆಗಳಂತೆ, ಬೆಂಕಿ ಮತ್ತು ಅದರ ಶಾಖದಂತೆ, ಹಾಲು ಮತ್ತು ಅದರ ಬಿಳುಪಿನಂತೆ, ಸಮುದ್ರ ಹಾಗೂ ಅದರ ಅಲೆಗಳಂತೆ ಬ್ರಹ್ಮ ಮತ್ತು ಮಾಯೆ ಇರುತ್ತವೆ. ಆದ್ದರಿಂದ ಶುದ್ಧಬ್ರಹ್ಮ ಅನಂತನಾಮ ರೂಪಗಳ ಜಗತ್ತಾಗಿ ತೋರಲು ಮಾಯಾತತ್ತ್ವ ಕಾರಣವಾದರೂ ಅದನ್ನು ಸತ್ಯವೆನ್ನುವಂತೆ ಮಾಡುವುದಾದರೂ ಏನು? ಇದೇ ಜೀವವನ್ನು ಆಕ್ರಮಿಸಿರುವ `ಅವಿದ್ಯಾ ಶಕ್ತಿ. ಜಗತ್ತು ಮಾಯೆಯ ಕಾರ್ಯವಾದರೆ, ಜೀವಾತ್ಮರ ದೇಹ, ಅಂತಃಕರಣ ಇತ್ಯಾದಿ ಅವಿದ್ಯೆಯ ಕಾರ್ಯ.

ಜಗತ್ತು ಬ್ರಹ್ಮದ ಭಾಗವಲ್ಲ; ಕೇವಲ ತೋರಿಕೆ ಮಾತ್ರ. ಜೀವನ ಭ್ರಾಂತಿಯಿಂದಾಗಿ ಹಗ್ಗ ಹಾವಿನಂತೆ ಕಾಣುವ ಹಾಗೆ ಶುದ್ಧಬ್ರಹ್ಮ ಜಗತ್ತಾಗಿ ತೋರುತ್ತದೆ. ಮಾಯೆಯ ಮೂಲಕ ವ್ಯಕ್ತವಾಗುವ ಬ್ರಹ್ಮವನ್ನು `ಈಶ್ವರ ಎಂದು ಕರೆಯಬಹುದು. ಈಶ್ವರ ಮಾಯೆಗೆ ಅಧೀನನಲ್ಲ. ಮಾಯೆಯನ್ನು ಅಧೀನದಲ್ಲಿಟ್ಟುಕೊಂಡು ಅದರ ಮೂಲಕ ಕಾರ್ಯ ನಿರ್ವಹಿಸುತ್ತಾನೆ. ಜೀವ ಮಾತ್ರ ಮಾಯೆಗೆ ಅಧೀನವಾಗಿ ವರ್ತಿಸುತ್ತದೆ. ಮಾಯೆ ಅಗತ್ಯವೋ ಅನಗತ್ಯವೋ ಹೇಳಲಾಗದಿದ್ದರೂ `ವಿದ್ಯಾಮಾಯೆ ಜೀವಿಗಳಿಗೆ ಸಹಾಕಾರಿಯಾಗಿದೆ. ಬ್ರಹ್ಮತತ್ವವೇ `ಈಶ್ವರನಾಗಿ ಸಾಕಾರ ಸಗುಣ ರೂಪದಿಂದ ಪ್ರಕಾಶಗೊಂಡು ಜೀವಿಗಳನ್ನು ಉದ್ಧರಿಸುವ ಕಾರ್ಯಕ್ಕೆ ಕಾರಣವಾದ ಮಾಯೆ ವಿದ್ಯಾಮಾಯೆ ಎನ್ನಿಸಿಕೊಳ್ಳುತ್ತದೆ. ರಾಮ, ಕೃಷ್ಣ ಮುಂತಾದ ಅವತಾರಪುರುಷರು, ರಾಮಕೃಷ್ಣ ಪರಮಹಂಸರಂಥವರು ವಿದ್ಯಾಮಾಯೆಯನ್ನು ಆಶ್ರಯಿಸಿಕೊಂಡೇ ತಮ್ಮ ಲೋಕ ಸಂಗ್ರಹ ಕಾರ್ಯ ಮಾಡಿದ್ದಾರೆ. ಈ ವಿದ್ಯಾಮಾಯೆ `ದೇಹಿಗಳ ಸಾಧನೆಗೆ ಆಕರ್ಷಕ ಹಿನ್ನೆಲೆ ಒದಗಿಸುತ್ತದೆ. ಪವಾಡಗಳ ಮೂಲಕ. ಅದ್ಭುತ ಶಕ್ತಿಭಾವದ ಮೂಲಕ ಜೀವರಾಶಿಗಳಿಗೆ ಊಧ್ರ್ವ ದೃಷ್ಟಿ ನೀಡುವಂತೆ ಮಾಡಲು ವಿದ್ಯಾಮಾಯೆ ಅನಿವಾರ್ಯ. ಆದರೆ ಯಾವುದು ಜೀವಿಯನ್ನು ಇಂದ್ರಿಯ ಲೋಲುಪನನ್ನಾಗಿಸಿ ಲಂಪಟತನ ಮೈಗೂಡಿಸಿ, ಸ್ವಸ್ವರೂಪ ಮರೆಸಿಬಿಡುವುದೋ ಅದು `ಅವಿದ್ಯಾಮಾಯೆ ಎನ್ನಿಸಿಕೊಳ್ಳುತ್ತದೆ. ವಿದ್ಯಾಮಾಯೆ ಮತ್ತು ಅವಿದ್ಯಾಮಾಯೆಗಳೆರಡೂ ಕ್ರಿಯಾಶೀಲವಾಗಿರುವುದರಿಂದ ಲೋಕಜೀವಾ ನಾಟಕಕ್ಕೆ ಒಂದು ವಿಶೇಷ ಮೆರುಗು ಉಂಟಾಗಿದೆ. ಮಾಯೆಯ ದ್ವಿಪಾತ್ರಾಭಿನಯವನ್ನು ಸಾಕ್ಷಿಪ್ರಜ್ಞೆ ನೋಡಿ ಆನಂದಿಸದೆ ಇರುವುದಿಲ್ಲ. ಜೀವಿಯನ್ನು ಆವರಿಸುವ ಮಾಯೆ ಎಷ್ಟು ಪ್ರಬಲವಾದುದು ಎಂಬ ವಿಚಾರ ಎಲ್ಲರಿಗೂ ತಿಳಿಯದೇ, ಆದರೆ ಅದನ್ನು ಗೆಲ್ಲುವ ವಿಧಾನ ತಿಳಿದವರು ಕೆಲವರು ಮಾತ್ರ. ಹಾಗೆ ತಿಳಿದ ಕೆಲವರಲ್ಲಿ ತಾವು ತಿಳಿದುದನ್ನು ಕಾರ್ಯರೂಪಕ್ಕೆ ತರುವವರು ಅತ್ಯಂತ ವಿರಳ.

ಸಚ್ಚಿದಾನಂದ ಬ್ರಹ್ಮನನ್ನು ಆಶ್ರಯಿಸಿಕೊಂಡು, ತನ್ನ ಪ್ರಭಾವವನ್ನು ತೋರಿಸುತ್ತದೆ ಎನ್ನಲಾದ ಮಾಯೆಗೆ ಅಸ್ತಿತ್ವವೇ ಇಲ್ಲವೆಂಬ ವಾದವುಂಟು. ವಸ್ತುನಿಷ್ಠವಾಗಿ ನೋಡಿದಾಗ ಇಲ್ಲದ ಮಾಯೆ ಇರುವಂತೆ ಕಾಣುತ್ತದೆ. ಜೀವಿಯಲ್ಲಿರುವ ಅವಿದ್ಯಾ ಅಥವಾ ಅಜ್ಞಾನ, ಬ್ರಹ್ಮವನ್ನು ಜಗತ್ತಾಗಿ ಮಾರ್ಪಡಿಸಿ ತೋರಿಸುತ್ತದೆ. ಕಾಮಾಲೆ ರೋಗದವನಿಗೆ ಎಲ್ಲವೂ ಹಳದಿಯಾಗಿ ಕಾಣುತ್ತದೆಂಬ ರೂಢಿಯ ಉದಾಹರಣೆಯನ್ನು ಇಲ್ಲಿ ಸ್ಮರಿಸಬಹುದು. ನೀರಿನ ಒಳಗೆ ಇರುವ ಪಾತ್ರೆ ನಿಜವಾಗಿ ಇರುವುದಕ್ಕಿಂತಲೂ ಕಡಿಮೆ ಆಳದಲ್ಲಿರುವಂತೆ ಕಾಣಿಸುವ, ನೀರಿನಲ್ಲಿ ಅರ್ಧ ನೀರಿನ ಹೊರಗೆ ಅರ್ಧ ಇರುವ ಕಡ್ಡಿ ಬಾಗಿದಂತೆ ಕಾಣುವ ದೃಶ್ಯವನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಈ ದೃಷ್ಟಿಯಿಂದ ನೋಡಿದಾಗ ಬ್ರಹ್ಮವನ್ನು ಆಶ್ರಯಿಸಿಕೊಂಡಿದೆ ಎನ್ನಲಾದ ಮಾಯೆ ಅಸ್ತಿತ್ವದಲ್ಲಿಯೇ ಇರುವುದಿಲ್ಲ. ಸ್ವಪ್ನವನ್ನು ಕಾಣುತ್ತಿದ್ದವ ಕಣ್ತೆರೆದಾಗ ಆ ಸ್ವಪ್ನ ಮಾಯವಾಗುವಂತೆ. ಜೀವನದ ಅಜ್ಞಾನ ತೊಲಗಿದಾಗ ಮಾಯೆ ಮರೆಯಾಗಿ ಬ್ರಹ್ಮವೊಂದೇ ಕಾಣುತ್ತದೆ. ಜೀವನಿಗೆ ಬ್ರಹ್ಮ ಜ್ಞಾನ ಲಭಿಸಿದಾಗ, ವೈವಿಧ್ಯಮಯ ಜಗತ್ತು ಸ್ವಪ್ನದಂತೆ ಮರೆಯಾಗಿ ಶುದ್ಧಪರ ಬ್ರಹ್ಮವೊಂದೇ ಗೋಚರಿಸುತ್ತದೆ. ಹೀಗೆ `ಗೋಚರಿಸುತ್ತದೆ ಎನ್ನುವುದೂ ಸಮರ್ಪಕವಲ್ಲ. ಏಕೆಂದರೆ ಮಾಯಾನಿರಸನವಾದಾಗ `ಬ್ರಹ್ಮ-ಜಗತ್ತು-ಜೀವಗಳ ಪ್ರತ್ಯೇಕ ಅಸ್ತಿತ್ವವೇ ಇಲ್ಲದೆ ಹೋಗುವುದರಿಂದ `ಗೋಚರಿಸುತ್ತದೆ ಎನ್ನುವುದಕ್ಕೆ ಯಾವ ಬೆಲೆಯೂ ಇರುವುದಿಲ್ಲ. ಉಪ್ಪಿನಬೊಂಬೆ ಸಮುದ್ರದ ಆಳವನ್ನು ನೋಡಲು ಹೋಗಿ ತನ್ನ ಪ್ರತ್ಯೇಕ ಅಸ್ತಿತ್ವವನ್ನೇ ಕಳೆದುಕೊಂಡು, ಹಿಂತಿರುಗಿ ಬರಲಾರದೆ ಹೋದಂತೆ. ಹಾಗಾದರೆ ಮಾಯಾನಿರಸನವಾಗುವ ಮೊದಲು ಜೀವಕ್ಕೆ ಪ್ರತ್ಯೇಕ ಅಸ್ತಿತ್ವವಿತ್ತೆ ಎಂದರೆ ಆಗಲೂ ಇಲ್ಲ ಎನ್ನುವುದೇ ಉತ್ತರ. ಜೀವದ ಅಜ್ಞಾನದಿಂದಾಗಿ ತಾನು ಪ್ರತ್ಯೇಕ ಎಂಬ ಬೋಧೆ ಉಂಟಾಗಿದ್ದಿತು. ನೀರಿನ ಮೇಲೆ ಇರುವ ಕಡ್ಡಿ ನೀರನ್ನು ಇಬ್ಭಾಗಿಸಿದಂತೆ ಕಾಣುವುದಿಲ್ಲವೇ. ಅದು ನಿಜವಲ್ಲವಾದರೂ ಅಂಥ ಭ್ರಮೆ ಉಂಟಾಗುತ್ತದೆ. ಈ ಕಾರಣದಿಂದಲೇ ಮಾಯೆ ಯಾವ ವರ್ಣನೆಗೂ ದಕ್ಕುವುದಿಲ್ಲ. ಆದ್ದರಿಂದಲೇ ಆದಿಶಂಕರಾಚಾರ್ಯರು ಮಾಯೆ ಸದ್ರೂಪವಲ್ಲ, ಅಸದ್ರೂಪವಲ್ಲ, ಬ್ರಹ್ಮಕ್ಕಿಂತ ಭಿನ್ನವಲ್ಲ, ಅಭಿನ್ನವಲ್ಲ, ಭಿನ್ನಾಭಿನ್ನವೂ ಅಲ್ಲ, ಅದು ಸಾವಯವವಲ್ಲ, ನಿರವಯವವಲ್ಲ, ಸಾವಯವ-ನಿರವಯವವೂ ಅಲ್ಲ, ಅದು ಅದ್ಭುತವಾದುದು, ಅನಿರ್ವಚನೀಯವಾದುದು ಎಂದಿದ್ದಾರೆ.											
 (ಎಂ.ಆರ್.ಕೆಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ